Sunday, October 18, 2009

ಪ್ರಯಾಣ

ನವರಾತ್ರಿಯ ಹಬ್ಬದ ಸಂಭ್ರಮ. ನನ್ನ ಕೆಲಸದ ಮೇರೆಗೆ ಚಿಕ್ಕಮಗಳೂರಿಗೆ ಬಂದಿದ್ದೆ. ಈಗ ಬಸ್ಸಿನಲ್ಲಿ ಕೂತು ಮತ್ತೆ ಬೆಂಗಳೂರಿಗೆ ಹೊರಟಿದ್ದೇನೆ. ಪ್ರಯಾಣ ಸುಖಕರವಾಗಿದೆ, ಮನಸ್ಸು ಶಾಂತವಾಗಿದೆ. ಚಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ಹಬ್ಬಕ್ಕೆ ಇನ್ನೂ ಮೆರೆಗು ನೀಡಿದೆ.
ಇಷ್ಟು ಸಂತಸದಲ್ಲಿರುವ ಮನಸ್ಸು ತನ್ನ ಭಾವನೆಗಳನ್ನು, ಸಂತೋಷವನ್ನು ಹೊರಹಾಕಬೇಕೆಂದು ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ನನ್ನ ಬುದ್ಧಿಯು ತನ್ನದೊಂದು ಕಾಣಿಕೆಯಾಗಿ, ಭಾಷೆ, ಲಿಪಿ ಇಲ್ಲದ ಭಾವನೆಗಳನ್ನು ಅರ್ಥವಾಗುವ ಭಾಷೆಯಲ್ಲಿ ಅನುವಾದಿಸಲು ಹೊರಟಿದೆ. ಈ ಬುದ್ಧಿಯದು ಇದು ಮೊತ್ತ ಮೊದಲ ಪ್ರಯತ್ನ.
ಆದರೆ, ಈ ಬುದ್ಧಿಯು ತನಗೆ ಐದು ಬೇರೆ ಬೇರೆ ಭಾಷೆಗಳು ತಿಳಿದಿದ್ದಾದರೂ, ಆ ಭಾವನೆಗಳನ್ನು ಅರ್ಥೈಸಲಾಗದೆ, ಅನುವಾದಿಸಲಾಗದೇ, ತೊಳಲಾಡುತ್ತಿದೆ. ಯಾವ ಮನಸನ್ನೂ ಅರ್ಥೈಸುವ ಯಾವ ಮೆದುಳೂ ಇನ್ನೂ ಹುಟ್ಟಿಲ್ಲ ಎಂದು ಕಾಣುತ್ತೆ......
ನನ್ನ ಅನಿಸಿಕೆಯ ಮಟ್ಟಕ್ಕೆ ಘಟಾನುಘಟಿ ಕವಿಗಳು, ಕವಯಿತ್ರಿಗಳೂ ಈ ಕಾರ್ಯದಲ್ಲಿ ಸೋತಿದ್ದಾರೆ. ಬಹುಷಃ ಈ ಕಾರಣದಿಂದಲೇ ಅವರು ನಿರಂತರವಾಗಿ ಅವರವರ ಭಾವನೆಗಳನ್ನು ಅನುವಾದಿಸುವ ಪ್ರಯತ್ನದಲ್ಲಿ ಅದ್ಭುತಗಳನ್ನು ಸೃಷ್ಟಿಸಿರುವುದು. ಈ ಪ್ರಯತ್ನವೇ ಅವರ ಬರಹಗಳಿಗೆ ಸ್ಫೂರ್ತಿ, ಇಂಧನ...
ಇದೇ ಯೋಚನೆಯ ಗುಂಗಿನಲ್ಲಿ, ನಾನು ನಿದ್ದೆಗೆ ಜಾರಿದ್ದೆ ಎಂದು ತಿಳಿದ ನನ್ನ ಪೆನ್ನು, ನನ್ನ ಕೈಯ್ಯಿಂದ ಜಾರಿತ್ತು...