Tuesday, December 15, 2009

ಸೂರ್ಯನ ಕುಂಚ



ತಾರಸಿಗೆ ಹೋಗುವ ಮೆಟ್ಟಿಲ ಬಳಿ ಇದ್ದ ಕಿಟಕಿಯ ಗಾಜು ತಿಳಿಗೆಂಪಾಗಿತ್ತು. ತಾರಸಿಗೆ ಹೋಗುವ ಅವಸರದಲ್ಲಿ ಕೈಯ್ಯಲ್ಲಿದ ಲೋಟದಿಂದ ಕಾಫಿ ಚೆಲ್ಲಿತ್ತು. ಹಲುಬಿ ಬಟ್ಟೆ ತಂದು ಒರೆಸಿದೆ. ಬಟ್ಟೆ ಅಲ್ಲೇ ಬಿಟ್ಟು ತಾರಸಿಗೆ ಹೋದೆ.
ಸೂರ್ಯನು ರಶ್ಮಿ ಎಂಬ ತನ್ನ ಕುಂಚದಿಂದ ಎಲ್ಲದಕ್ಕೂ ತಿಳಿಗೆಂಪು ಬಣ್ಣ ಮೆತ್ತಿದ್ದ. ಆಹಾ ಎಷ್ಟು ಸುಂದರ ದೃಶ್ಯ. ಪ್ರಕೃತಿಯು ನಿತ್ಯವೂ ಶೃಂಗಾರಮಯ. ಕ್ಷಣ ಕ್ಷಣಕ್ಕೂ ತನ್ನ ಬಣ್ಣವನ್ನು, ಬಣ್ಣದೊಂದಿಗೆ ಭಾವವನ್ನು, ಭಾವದೊಂದಿಗೆ ಕಾರ್ಯವನ್ನು ಬದಲಾಯಿಸುತ್ತದೆ,
ನಿಲ್ಲದೆ ಮುಂದುವರೆಸುತ್ತಿರುತ್ತದೆ. ಇದು ಅದರ ಕೊನೆಯಿಲ್ಲದ ಸಾವಿಲ್ಲದ ಪ್ರಕ್ರಿಯೆ. ಯೋಚಿಸಿ ಇದೊಂದು ಅದ್ಭುತವಲ್ಲವೇ?
ನಾನೂ ಈ ಪ್ರಕೃತಿಯ ಒಂದು ಭಾಗ. ಹೀಗಿರುವಾಗ ಯಾಕೆ ನಾನು ಪ್ರಕೃತಿಯ ಭಾಗವಲ್ಲವೇನೋ ಎಂಬಂತೆ, ಅದಕ್ಕೆ ತದ್ವಿರುದ್ಧವಾಗಿ, ಯಾಂತ್ರಿಕವಾಗಿ ಬದುಕುತ್ತಿದ್ದೇನೆ? ಹಾಗೆಂದು ನನ್ನ ಕರ್ತವ್ಯವನ್ನು ಬಿಟ್ಟು ದಿನವೂ ಬೇರೆ ಕೆಲಸಕ್ಕೆ ಕೈ ಹಾಕಬೇಕೆಂದಲ್ಲ. ಬದುಕನ್ನು ದಿನವೂ ಹೊಸ ಹೊಸ ದೃಷ್ಟಿಕೋನದಲ್ಲಿ ನೋಡಿದರೆ, ಜಗತ್ತು ದಿನವೂ ಹೊಸದಾಗಿ ಕಾಣುತ್ತದೆ. ಬೇರೆ ಬೇರೆ ರೀತಿಯಲ್ಲಿ ಯೋಚಿಸಿದಾಗ, ನಮ್ಮ ನಿತ್ಯದ ಯಾಂತ್ರಿಕತೆಯಲ್ಲೇ ಹೊಸ ಸಂದರ್ಭಗಳನ್ನು ಹುಟ್ಟುಹಾಕಿ, ಅದರಲ್ಲಿ ಬಾಳಿ, ಹೊಸ ಅನುಭವಗಳನ್ನು ಪಡೆಯಬಹುದು.
ನಾಳೆ ಯಾವ ಅನುಭವ, ಯಾವ ಭಾವ, ನನ್ನಮೇಲೆ ದಾಳಿಯಿಡುತ್ತದೆಯೋತಿಳಿಯೆ. ಆದರೆ ನಾಳೆಗೆ ಕಾತರದಿಂದ ಕಾಯುತಿದ್ದೇನೆ. ಅದರ ವಿವಿಧತೆಯನ್ನ ಅನುಭವಿಸುವುದಕ್ಕೆ ಮನಸ್ಸು, ಬುದ್ಧಿ ಸಿದ್ಧವಿದೆ.
ಸೂರ್ಯನು ತನ್ನ ಕುಂಚವನ್ನು ಮೋಡದ ನೀರಿನಲ್ಲಿ ಅದ್ದಿದ್ದಾನೇನೋ, ಆಕಾಶ ಗಾಢ ನೀಲಿ ಬಣ್ಣಕ್ಕೆ ತಿರುಗಿದೆ.
ಸೂರ್ಯ ದೇವನ ಈ ಪಾಠಕ್ಕೆ ಗುರು ಕಾಣಿಕೆ ನೀಡಬೇಕೆಂದಿದ್ದೇನೆ. ನನ್ನ ಯಾವುದೇ ಕೆಲಸದಲ್ಲಿ ಸ್ವಲ್ಪವಾದರೂ ತಪ್ಪು ಇದ್ದೆ ಇರುತ್ತದೆ. ಅದು ನನ್ನ ದೃಷ್ಟಿಕೋನದ ಪ್ರಭಾವ. ತಪ್ಪು ಮಾಡದೇ ಕೆಲಸ ಮಾಡುವುದು ಬರಿ ದೇವರಿಂದ ಸಾಧ್ಯ ಎಂದು ನಂಬಿದ್ದೆ. ಈಗಿನಿಂದ ನನ್ನ ದೃಷ್ಟಿಕೋನ ಸ್ವಲ್ಪ ಬದಲಾಯಿಸುವ ಮನಸ್ಸು ಮಾಡಿದ್ದೇನೆ. ತಪ್ಪು ಮಾಡದೆ ಕೆಲಸ ಮಾಡಲು ಸಾಧ್ಯ ಎಂದು ನನಗೆ ನಾನು ನಂಬಿಸಿದ್ದೇನೆ. ನಾಳೆಯ ದಿನ ಹೇಗಿರುತ್ತೆ ನೋಡಬೇಕು.
ನನ್ನ ಕಲ್ಪನಾ ಲೋಕದಿಂದ ಆಚೆ ಬಂದಾಗ ಸೂರ್ಯನು ಆಕಾಶಕ್ಕೆ ಕಪ್ಪು ಬಣ್ಣ ಬಳಿದು ವಿದಾಯ ಹೇಳಿದ್ದ. ಕೆಳಗಿಂದ ಅಮ್ಮ ತರಕಾರಿ ಹೆಚ್ಚಲು ಕೂಗುತಿದ್ದಾಳೆ. ಈಗ ತಪ್ಪು ಮಾಡಿದರೆ ಕೈ ಬೆರಳೇ ದಂಡವಾಗಿ ಕೊಡಬೇಕಾದೀತು!!!!