Wednesday, June 16, 2010

CAFE` ಸಂಜೆ

" India needs 30 runs from 35 balls... This is an easy win if India doesn't loose wickets...."
LCD TV ಇಂದ ಕೇಳಿಬರುತ್ತಿತ್ತು ರವಿಶಾಸ್ರ್ತಿಯ ಕಂಚಿನ ಕಂಠದ ಕಾಮೆಂಟ್ರಿ. ಅಲ್ಲೇ ಪಕ್ಕದಲ್ಲಿ ಸುಸಜ್ಜಿತ ಸೋಫಾದಲ್ಲಿ ನಾನು ನನ್ನ ಬಳಗದೊಂದಿಗೆ relax ಮಾಡುತ್ತಿದ್ದೆ. ನಮ್ಮ ಮುಂದೆ Chocolate ice-cream, Cheese cake, Ice coffee, ice tea, cappuccino, espresso ಮುಂತಾದುವುಗಳ ಮಹಾಪೂರವೇ ನೆರೆದಿತ್ತು. ಆಗತಾನೆ ಊಟ ಮುಗಿಸಿದ್ದ ನಾವು ಇವನ್ನು ತಿನ್ನಲಾರದೆ ತಿನ್ನುತಿದ್ದೆವು. ನಾನು 'Cappuccino' ಎಂಬೋ ಬಿಸಿ ಕಾಫಿಯನ್ನು ಹೀರುತ್ತಾ ನನ್ನ ಬಳಗದವರ ಮಾತನ್ನು ಕೇಳುತ್ತಿದ್ದೆ. ಹಾಡಿದ್ದೇ ಹಾಡಿದ ಕಿಸಬಾಯಿ ದಾಸನ ಹಾಡಿನಂತಿದ್ದ ಅವರ ಮಾತು ಬೇಸರವೆನಿಸಿತು. ಅಂತರ್ಮುಖಿಯಾಗಿರುವುದೇ ಲೇಸೆನಿಸಿತು. ಆಚೆ ಕಿಟಕಿಯ ಗಾಜಿನ ಮೇಲೆ ಮಳೆ ನೀರು ಹರಿಯುತ್ತಿತ್ತು, ಒಳಗೆ AC ಚಳಿ ಗಾಳಿ ಮೈಗೆ ಹಿಂಸೆಯಾಗಿತ್ತು. ಗೋಡೆಯ ಮೇಲಿದ್ದ ಗಡಿಯಾರಣ್ಣನ ಎರಡೂ ಮೀಸೆ ಕೋಪದಿಂದ ಸೊಟ್ಟಗಾಗಿರುವಂತೆ ಕಂಡಿತು. ಅವನ ಸಣ್ಣ ಮೀಸೆ ಕೆಳಕ್ಕೆ ಸೊಟ್ಟಗೆ ಬಾಗಿ, ನಾವು ಬಂದು ಎರಡು ಗಂಟೆಗಳಾಯಿತು ಎಂದು ಸಾರುತಿತ್ತು. Relax ಮಾಡಲು ಬಂದ ನನಿಗೆ ಏನೋ ಕಸಿವಿಸಿ.

ಅಷ್ಟರಲ್ಲಿ ಮಿತ್ರನಂತೆ ಬಂದ 'ಮಿತ್ರ' ತನ್ನ ಕಿರಣಗಳಿಂದ ಮೋಡಗಳನ್ನು ಚದುರಿ ಬೆಳಕಿನ ಉಡುಗೊರೆ ನೀಡಿದ. ಉದಾಸೀನದಿಂದ ಕೂತಿದ್ದ ನನ್ನ ಗೆಳೆಯರು, ಸಮಯದ ಅರಿವಾಗಿ ಆಫೀಸಿಗೆ ಹೊರಡಲು ಅಣಿಯಾದರು. ನಮ್ಮ Boss ಅದೆಷ್ಟೋ ಮೊತ್ತದ ಬಿಲ್ಲನ್ನು ಕಟ್ಟಿ ಆಚೆ ಬಂದರು.

ಆಚೆ ಎಲ್ಲವೂ ಹೊಚ್ಚ ಹೊಸದಂತೆ ಕಾಣುತ್ತಿತ್ತು. ಎಲವೂ ಸ್ವಚ್ಛ, ಸ್ಪಷ್ಟ. ಆಗ ಗೋಚರಿಸಿದ್ದು, ಮಳೆಯಲ್ಲಿ ಪೂರ್ತಿಯಾಗಿ ತೋಯ್ದ ಒಬ್ಬ ಕಾಲಿಲ್ಲದ ಮುದಿ ಭಿಕ್ಷುಕ. ತನ್ನ ಮುರಿದ ಮರದ ಹಾಳೆಯ ಗಾಲಿಯಮೇಲೆ ಕೂತು ನಮ್ಮೆಡೆಗೆ ಬರುತ್ತಿದ್ದ. ಹಸಿವೆಯಿಂದ ಉಸಿರಾಡಲೂ ಆತ ಅಶಕ್ತ. ದೃಶ್ಯ ಕಣ್ಣಿಗೆ ಕಟ್ಟಿತ್ತು... ಆಚೆ ಸ್ನೇಹಿತರು ಕಾರೊಳಗೆ ಕೂರಲು ಕರೆಯುತ್ತಿದ್ದರು...

ಕಾರು ಆಫೀಸಿನತ್ತ ಧಾವಿಸಿತ್ತು. ಸ್ನೇಹಿತರ ಮಾತು ಮುಂದುವರೆದಿತ್ತು... ಕಿಟಕಿಯಿಂದಾಚೆ ಸುಂದರ ನವ ವಿನ್ಯಾಸದ ಕಟ್ಟಡಗಳು ಏನನ್ನೋ ಸಾಧಿಸಿ ಗೆದ್ದವರಂತೆ ತಲೆಯೆತ್ತಿ ಸಾಲಾಗಿ ನಿಂತಿದ್ದವು. ಅವನ್ನು ನೋಡಿ ಏನೋ ಕಳಕೊಂಡ ಭಾವ. ಕಟ್ಟಡಗಳ ಬುನಾದಿ ಟೊಳ್ಳು ಎಂದು ಅನಿಸುತ್ತಿತ್ತು.

ಹೊಟ್ಟೆಯಲ್ಲಿ ಕುಕ್ಕುತ್ತಿತ್ತು ಮಧ್ಯಾನ್ನದ ಊಟ, ಕಣ್ಣಿಗೆ ಕಟ್ಟಿತ್ತು ಆ ಭಿಕ್ಷುಕನ ನೋಟ, ಮನದಲ್ಲಿ ಏನೋ ಸಂಕಟ. ಕೊನೆಗೆ ಕಿಸೆಯಿಂದ ಪರ್ಸನ್ನು ತೆಗೆದು ನೋಡಿದೆ.... ಅದರಲ್ಲಿ ಒಂದು ಬಿಡಿಗಾಸೂ ಇರಲ್ಲಿಲ್ಲ........ ಮನಸ್ಸಿಗೆ ಏನೋ ಹುಸಿಯಾದ ಸಮಾಧಾನವಾಗಿತ್ತು!!!!!....

Saturday, February 27, 2010

ಭ್ರಾಂತಿಭ್ರಾಂತು ಬಂದಿದೆ ನನಗೆ
ಈ ಭ್ರಮೆಯ ಬಗ್ಗೆ,
ತಿಳಿಯದಾಗಿದೆ ಎನಗೆ
ಈ ಭ್ರಾಂತಿ ಬಗ್ಗೆ.

ಸೋಜಿಗವು ನನಗೆ
ಭೂತಕಾಲದ ಬಗ್ಗೆ,
ನಿನ್ನೆ ಎಂಬ ಭೂತ
ಇಂದು ಕಾಡಿದಬಗ್ಗೆ.

ಬೇಸರವು ನನಗೆ
ಈ ಭ್ರಾಂತಿ ಬಗ್ಗೆ,
ನಾಳೆಯಾ ಭವ-ವಿಷಯ
ಸಿಗದೀಗಿಂದ ಈಗ್ಗೆ.

ಅನುಮಾನ ನನಗೆ
ವರ್ತಮಾನದ ಬಗ್ಗೆ,
ಇಂದು ಎಂಬುದು ನಿಜವೇ?
ಹೇಳಿದರಬಗ್ಗೆ.

ಸತ್ಯವೇ ಉದ್ಭವಿಸು
ಮನದಲ್ಲಿ ಈಗ್ಗೆ,
ಸಾಕ್ಷಾತ್ಕಾರ ಸ್ಫೋಟಿಸು
ಒಡೆದು ಈ ಭ್ರಾಂತಿ ಬುಗ್ಗೆ.

Friday, January 29, 2010

ಹರಿದ ಹತ್ತು ರೂಪಾಯಿ


ಉಸಿರಾಡುತಿದ್ದೆ ಹಾಯಾಗಿ,
ಜೀವಂತ ಮರವಾಗಿ,
ಬದುಕಿದ್ದೆ ನಾ ಪರರಿಗಾಗಿ,
ಪರರು ಕಡಿದರು ನನ್ನ ಅವರವರಿಗಾಗಿ...

ತೀಡಿದರು ನನ್ನ ಹಾಳೆಯಾಗಿ,
ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,
ಟಂಕ ಠಸ್ಸೆಯ ಏಟು ತಿಂದಾಗಿ,
ಹೊರ ಬಂದೆ ನಾ ಹತ್ತು ರೂಪಾಯಾಗಿ...

ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,
ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,
ಓಡಿದೆ ನಾ ಹತ್ತು ರೂಪಾಯಾಗಿ...

ಕೈಗಳಲಿ ಒದ್ದಾಡಿ,
ಒದ್ದೆಯಿಂದೆದ್ದೊಣಗಿ
ಮತ್ತೊದ್ದೆಯಾಗಿ
ಮುಪ್ಪೇರಿ ಮುದಿಯಾಗಿ ಬಿದ್ದೆನಾ ತುಂಡಾಗಿ..

ಈಗ ಬಿದ್ದಿರುವೆ ತಿರಸ್ಕೃತನಾಗಿ,
ಸಾರಿದ್ದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಿಂದೆ ಉಸಿರಾಡುತಿದ್ದೆ ಹಾಯಾಗಿ,
ನಾ ಜೀವಂತ ಮರವಾಗಿ!!!!