Thursday, March 27, 2014

ನಲ್ಲ ನೀನವನಲ್ಲ


ನಲ್ಲ, ನೀನವನಲ್ಲ,
ನಿನ್ನಂತೆ ಬಹುಜನರಿಲ್ಲ,
ನನ್ನೀ ಮಾತ ಕೇಳಲ್ಲ. 

ನಲ್ಲ, ಬೇರೆಯವರೆಲ್ಲ 
ನಿನ್ನಂತೆ ಹಸನ್ಮುಖರಲ್ಲ,
ನಿನ್ನಂತೆ ನಾನಾಗಬೇಕಲ್ಲ. 

ನಲ್ಲ, ನೀನವನಲ್ಲ,
ನಲ್ಲೆ ಆಟದ ಬೊಂಬೆಯಲ್ಲ
ಎಂತಿಳಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ಗೃಹಿಣಿ ಪಂಜರದ ಗಿಣಿ 
ಎಂತಿಳಿಯುವವ ನೀನಲ್ಲ. 

ನಲ್ಲ, ನೀನವನಲ್ಲ,
ಸ್ತ್ರೀ ಸಮ್ಮಾನವ,
ಅರಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ತಠಸ್ಥ ಸಂತ ನೀನಲ್ಲ,
ಕಾಮಪಿಪಾಸುವೂ ಅಲ್ಲ. 

ನಲ್ಲ, ನೀನವನಲ್ಲ,
ತಾಯ್ತನದ ಸು-ಬೇನೇಯ
ತಿಳಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ಕಂದನಾಕ್ರಂದನವ 
ನಿಲಿಸಲೊಲ್ಲದವನಲ್ಲ. 

ನಲ್ಲ ನೀನವನಲ್ಲ,
ಸತಿ ಸೇವೆ ಅವಮಾನವಲ್ಲ 
ಎಂತಿಳಿಯದ ಅಜ್ಞಾನಿಯಲ್ಲ. 

ನಲ್ಲ, ನಾನವಳಲ್ಲ,
ನಿನ್ನ ಅಪರಿಮಿತ ಪ್ರೀತಿಯ 
ಅರಿವಿಲ್ಲದವಳು ನಾನಲ್ಲ. 

ನಲ್ಲ, ಇದನ ನಾ ತಿಳಿಯದವಳಲ್ಲ,
ನಿನ್ನ ಸುಗುಣಕ್ಕೆ ಸರಿಸಾಟಿಯಿಲ್ಲ,
ನನ್ನ ನಲ್ಲ ನಿನ್ನಂತೆ ಬೇರೊಬ್ಬನಿಲ್ಲ.