
ಉಸಿರಾಡುತಿದ್ದೆ ಹಾಯಾಗಿ,
ಜೀವಂತ ಮರವಾಗಿ,
ಬದುಕಿದ್ದೆ ನಾ ಪರರಿಗಾಗಿ,
ಪರರು ಕಡಿದರು ನನ್ನ ಅವರವರಿಗಾಗಿ...
ತೀಡಿದರು ನನ್ನ ಹಾಳೆಯಾಗಿ,
ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,
ಟಂಕ ಠಸ್ಸೆಯ ಏಟು ತಿಂದಾಗಿ,
ಹೊರ ಬಂದೆ ನಾ ಹತ್ತು ರೂಪಾಯಾಗಿ...
ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,
ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,
ಓಡಿದೆ ನಾ ಹತ್ತು ರೂಪಾಯಾಗಿ...
ಕೈಗಳಲಿ ಒದ್ದಾಡಿ,
ಒದ್ದೆಯಿಂದೆದ್ದೊಣಗಿ
ಮತ್ತೊದ್ದೆಯಾಗಿ
ಮುಪ್ಪೇರಿ ಮುದಿಯಾಗಿ ಬಿದ್ದೆನಾ ತುಂಡಾಗಿ..
ಈಗ ಬಿದ್ದಿರುವೆ ತಿರಸ್ಕೃತನಾಗಿ,
ಸಾರಿದ್ದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಿಂದೆ ಉಸಿರಾಡುತಿದ್ದೆ ಹಾಯಾಗಿ,
ನಾ ಜೀವಂತ ಮರವಾಗಿ!!!!