Thursday, March 27, 2014

ನಲ್ಲ ನೀನವನಲ್ಲ


ನಲ್ಲ, ನೀನವನಲ್ಲ,
ನಿನ್ನಂತೆ ಬಹುಜನರಿಲ್ಲ,
ನನ್ನೀ ಮಾತ ಕೇಳಲ್ಲ. 

ನಲ್ಲ, ಬೇರೆಯವರೆಲ್ಲ 
ನಿನ್ನಂತೆ ಹಸನ್ಮುಖರಲ್ಲ,
ನಿನ್ನಂತೆ ನಾನಾಗಬೇಕಲ್ಲ. 

ನಲ್ಲ, ನೀನವನಲ್ಲ,
ನಲ್ಲೆ ಆಟದ ಬೊಂಬೆಯಲ್ಲ
ಎಂತಿಳಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ಗೃಹಿಣಿ ಪಂಜರದ ಗಿಣಿ 
ಎಂತಿಳಿಯುವವ ನೀನಲ್ಲ. 

ನಲ್ಲ, ನೀನವನಲ್ಲ,
ಸ್ತ್ರೀ ಸಮ್ಮಾನವ,
ಅರಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ತಠಸ್ಥ ಸಂತ ನೀನಲ್ಲ,
ಕಾಮಪಿಪಾಸುವೂ ಅಲ್ಲ. 

ನಲ್ಲ, ನೀನವನಲ್ಲ,
ತಾಯ್ತನದ ಸು-ಬೇನೇಯ
ತಿಳಿಯದವ ನೀನಲ್ಲ. 

ನಲ್ಲ, ನೀನವನಲ್ಲ,
ಕಂದನಾಕ್ರಂದನವ 
ನಿಲಿಸಲೊಲ್ಲದವನಲ್ಲ. 

ನಲ್ಲ ನೀನವನಲ್ಲ,
ಸತಿ ಸೇವೆ ಅವಮಾನವಲ್ಲ 
ಎಂತಿಳಿಯದ ಅಜ್ಞಾನಿಯಲ್ಲ. 

ನಲ್ಲ, ನಾನವಳಲ್ಲ,
ನಿನ್ನ ಅಪರಿಮಿತ ಪ್ರೀತಿಯ 
ಅರಿವಿಲ್ಲದವಳು ನಾನಲ್ಲ. 

ನಲ್ಲ, ಇದನ ನಾ ತಿಳಿಯದವಳಲ್ಲ,
ನಿನ್ನ ಸುಗುಣಕ್ಕೆ ಸರಿಸಾಟಿಯಿಲ್ಲ,
ನನ್ನ ನಲ್ಲ ನಿನ್ನಂತೆ ಬೇರೊಬ್ಬನಿಲ್ಲ. 

Thursday, June 6, 2013

ಥ್ಯಾಂಕ್ ಯೂ!!!


"ಇದು ತೆಗೊಳಿ, ಹತ್ತು ರೂಪಾಯಿ, ಸೊಪ್ಪಿಂದು, ಥ್ಯಾಂಕ್ಸ್ ಅಮ್ಮ" ನನ್ನ ಬಾಯಿಂದ ಉವಾಚ.
"ನಮಗೆಂತಕ್ಕವ್ವಾ ತ್ಯಾಂಕ್ಸು... ಬರ್ತಿನವ್ವ" ಎಂದು ಹೊರಟೇಬಿಟ್ಟಳು ಸೊಪ್ಪಿನವಳು. 'ಸೊಪ್ಪಮ್ಮ'ನ ಇಂಥ ಉತ್ತರ ಅಪೇಕ್ಷಿಸಿರಲಿಲ್ಲ. ಸಾಮನ್ಯವಾಗಿ ಥ್ಯಾಂಕ್ಸ್ ಹೇಳಿದಕ್ಕೆ ಜನ "ಸರಿ" ಎಂದು ಉತ್ತರಿಸುತ್ತಾರೆ. 

 ಯಾವ ಅಂಗಡಿಗೆ ಹೋದರೂ, ಅಥವ ಬೇರೆಲ್ಲಾದರೂ ಏನಾದರೂ ಕೊಂಡು ದುಡ್ಡು ಕೊಡುವಾಗ ನನಗರಿವಿಲ್ಲದೆಯೇ ಈ 'ಥ್ಯಾಂಕ್ಸ್' ಪದ ನನ್ನ ಬಾಯಿಂದ ಆಚೆ ಬರುತ್ತದೆ. ಎಷ್ತರ ಮಟ್ಟಿಗೆಂದರೆ, ಆಟೋದವನ ಜೊತೆ ದಾರಿಯುದ್ದಕ್ಕೂ ಮೀಟರ್ ಸರಿಯಿಲ್ಲವೆಂದು ಜಗಳವಾಡಿದ್ದರೂ, ದುಡ್ಡು ಕೊಡುವ ವೇಳೆಗೆ ಥ್ಯಂಕ್ಸ್ ಹೇಳಿಬಿಡುತ್ತೇನೆ. ಆಟೋದವ ಮೂತಿ ತಿರುಗಿಸಿ ಟುರ್ ಟುರ್ರ್sss ಎಂದು ತನ್ನ ದಾರಿ ಹಿಡಿದಾಗಲೇ ಮನಸ್ಸಿಗೆ ಅನಿಸುವುದು- "ಎವನಿಗೆ ಥ್ಯಾಂಕ್ಸ್ ಬೇರೆ ಕೇಡು"ಎಂದು.

ಆದರೆ ಅಂದು ಬೆಳಿಗ್ಗೆ ಸೊಪ್ಪಮ್ಮನ ಅನಪೇಕ್ಷಿತ ಉತ್ತರದಿಂದ ನನ್ನ ಈ ಅಭ್ಯಾಸದ ಅರಿವಾಗಿತ್ತು. ಸ್ವಲ್ಪ ಸೊಪ್ಪಮ್ಮನ ಪ್ರಶ್ನೆಯನ್ನು ಅವಲೋಕಿಸಿದೆ. ಅವರಿಗೆ ಏಕೆ ಥ್ಯಾಂಕ್ಸ್ ಹೇಳಿದೆ? ನೀವು ಯಾರಿಗಾದರೂ 'ಥ್ಯಾಂಕ್ಸ್' ಅಥವ 'ಸಾssರಿ' ಹೇಳುವಾಗ ನಿಜವಾಗಿಯೂ ಮನಃಪೂರ್ವಕವಾಗಿ ಹೇಳುತ್ತೀರಾ? ಅಥವ just ಅಭ್ಯಾಸ ಬಲವೋ? ಎಂದಾದರೂ ನಿಮ್ಮ ಅನುಭವಕ್ಕೆ ಬಂದಿರಬೇಕು, ನಿಮಗೆ ಸಣ್ಣ ಪುಟ್ಟ ಉಪಕಾರ ಮಾಡಿದವರಿಗೆ 'ಥ್ಯಾಂಕ್ಸ್', ಅಥವ ನಿಮ್ಮ ಸಣ್ಣ ಅಪ್ರಭಾವಿತ ತಪ್ಪುಗಳಿಗೆ 'ಸಾssರಿ' ಎಂದು ಕಣ್ಣಲ್ಲಿ ಕಣ್ಣಿಟ್ಟು ಅಪೇಕ್ಷಿತನಿಗೆ ಹೇಳಿದಾಗ ಉಭಯರಿಗೂ ಅದರ ಪ್ರಾಮಣಿಕತೆ ಅರಿವಾಗಿ ಮನಃ ಸಂತೋಷಗೊಳ್ಳುತ್ತದೆ. 

 ನನ್ನ ಅನಿಸಿಕೆಯ ಮಟ್ಟಿಗೆ, ಆಂಗ್ಲ ಭಾಷೆಯಂಥ ಉನ್ನತ ಭಾಷೆಯ ರಚನಕಾರರು ಈ ಬಹು ಮಹತ್ವದ ಭಾವಕ್ಕೆ, ಅನಿಸಿಕೆಗೆ, ಅನ್ಯಾಯವಾದಂತೆ ಬಹು ಚಿಕ್ಕದಾದ ಶಬ್ದ ಪ್ರಯೋಗ ಮಾಡಿದ್ದರೆ. ಇದರಿಂದ ಈ ಶಬ್ದ ಪ್ರಯೋಗ ಮಾಡುವಾಗ, ಹೇಳುವವನ ಭಾವಪೂರ್ಣ ಕಣ್ನೋಟ ಅಪೇಕ್ಷಿತನ ಕಣ್ಣು ತಲುಪುವ ಮೊದಲೇ ಈ ಶಬ್ದಹಗಳು ಉವಾಚವಾಗಿ ಮಾಯವಾಗುತ್ತವೆ. ಹೀಗಲ್ಲದೆ, ನಮ್ಮ ಕನ್ನಡ ಭಾಷೆಯಲ್ಲಿ, ಅಥವ ನಮ್ಮ ದೇಶದ ಇನ್ನಾವ ಭಾಷೆಯಲ್ಲಾದರೂ ತೆಗೆದುಕೊಌ, ಸ್ವಚ್ಛವಾಗಿ ಸುಂದರವಾಗಿ "ಧನ್ಯವಾದಗಳು" ಅಥವ "ಶುಕ್ರಿಯಾ" ಅಥವ "ಶುಕೃಗುಜಾರ್ ಹೂಂ" ಎಂದು ಬಾಯ್ತುಂಬ ಹೇಳಬಹುದು. ಈ ಪದಗಳು ಇಂದಿನ ದಿನಗಳಲ್ಲಿ ಸಾಮಾನ್ಯ ಆಡು ಭಾಷೆಯಲ್ಲಿ ಪ್ರಯೋಗ ಮಾಡಿದರೆ ನಾಟಕೀಯವೆನಿಸಬಹುದು. ಆದರೆ ಇದು ಬಹು ಮಹತ್ವದ್ದು ಎಂದು ನನ್ನ ಅನಿಸಿಕೆ. ನಮ್ಮ ಮಾತೃ ಭಾಷೆಯ ಈ ಸ್ಥಿತಿಗೆ ನಾವೇ ಕಾರಣರಾಗಿರುವುದು ಶೋಚನೀಯ.

 ಇರಲಿ, ಹೀಗಿರುವಾಗ, ನಾನೊಂದು 'vote of ಧನ್ಯವಾದಗಳನ್ನು' ಕೊಡಬೇಕೆಂದಿದ್ದೆನೆ. ಅವು, ಉದಾಹರಣೆಗೆ, ಭೆಳೆಗ್ಗೆ ಏಳುವಾಗ ಬೆಚ್ಚನೆಯ ಹೊದಿಕೆಯು- "ಇನ್ನೂ ಮಲಗು ಮರಿ" ಎಂದು ಹೇಳಿದ್ದಕ್ಕೆ, ಎಷ್ತು ಸರ್ತಿ ಬಯ್ಮುಚ್ಚಿಸಿದರೂ ಬಡಕೊಳ್ಳೋ ಅಲೆರಾಮಿನ ಸಹನೆಗೆ, ಬ್ರಶ್- ಪೇಷ್ತು ಕಂಡುಹಿಡಿದವನಿಗೆ, ಬೆಳಗ್ಗಿನ ಛಳಿಯಲ್ಲಿ ಹಾಲು, ಪೇಪರ್, ತರಕಾರಿ ಇತ್ಯದಿ ತಂದುಕೊಡುವವನಿಗೆ, ಎಷ್ತೇ ರಷ್ ಇದ್ದರೂ ಬಸ್ಸಿನಲ್ಲಿ ಸೇರಿಸಿಕೊಂಡು ಟಿಕೆಟ್ ಕೊಡುವ ಕಂಡೆಕ್ಟರಿಗೆ, ಮತ್ತೆ ಇನ್ನೂ ಹಲವರಿಗೆ. ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎನ್ನುವಂತೆ, ನಮ್ಮ ಸಣ್ಣ ಪುಟ್ಟ ಕೆಲಸಗಳು ನಮ್ಮ ಇಡೀ ದಿನವನ್ನು ಸಾಕಾರಗೊಳಿಸುತ್ತದೆ. ಈ so called ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡುವವರಿಗೆ ನನ್ನ ಅನಂತ ಧನ್ಯವಾದಗಳು. Last but not the least, ನಮಗೆ ಜನ್ಮ ಕೊಟ್ಟ ತಂದೆ ತಾಯಿ ಮತ್ತು ಸಮಾನರು, ಬಂಧು- ಬಳಗ, ಮಿತ್ರ- ಮೈತ್ರಿಣಿಯರು, ಮತ್ತೆ ಕೆಲವು ಜನ ದೇಶವನ್ನು ಚಲಾಯಿಸುವವರು, ಕಾಪಾಡುವವರು, ಮತ್ತು ದೇಶವನ್ನೇ ಉದ್ಭವಿಸಿ ರೂಪಿಸುವವರಿಗೆ, ಮತ್ತೆ ಗವಂತನಿಗೆ ನನ್ನ ಅನಂತಾನಂತಾನಂತ ಧನ್ಯವಾದಗಳು.

 ನನ್ನ ಈ ಚಿಕ್ಕ ಅಪ್ರಭಾವಿತ ಲೇನವನ್ನು ಓದಿದ್ದಕ್ಕೆ ನಿಮಗೆಲ್ಲರಿಗೂ ಥ್ಯಂಕ್ಸ್. ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾದಿದ್ದಕ್ಕೆ ಸಾssರಿ.
"ಯೆಲಾ ಇವಳಾ, ಇಷ್ತೆಲ್ಲಾ ಬರ್ದು ಮತ್ತೆ 'ಥ್ಯಂಕ್ಸ್ - ಸಾssರಿ' ಅಂತಾಳಲ್ಲಪ್ಪ" ಎನ್ನಬೇಡಿ. ನನ್ನ ತಪ್ಪಿನ ಅರಿವಾಗಿದೆ, ದಯವಿಟ್ಟು ಮನ್ನಿಸಿ ಕ್ಷಮಿಸಿ. ಸಹನೆಯಿಂದ ಕಷ್ತಪಟ್ಟು ಓದಿ ಇಷ್ತಪಟ್ಟಿದ್ದಕ್ಕೆ ನನ್ನ ಮನಃಪೂರ್ವಕ ಧನ್ಯವಾದಗಳು.
ಮತ್ತೆ ಸಿಗೋಣ..
ನಿಮ್ಮ ನಮ್ರತಾ ಭಾಗವತ್..

Wednesday, September 28, 2011

ಕಲಸುಮೇಲೋಗರಕ್ಕೆ ಬಿಸಿ ಬಿಸಿ ತುಪ್ಪ

    
    ಮನದಾಳದ ಮಾತು ಅರ್ಥೈಸಲು ಏಕಿಷ್ಟು ಕಷ್ಟ? ನನಗೆ ನಾನೇ ಒಂದು ಪ್ರಶ್ನಾರ್ಥಕ ಚಿನ್ಹೆ..

 ಯಾವುದೋ ಒಂದು ತಿಳಿಯದ ಹೆಬ್ಬಯಕೆ.. ತಿಳಿದರೆ ಏನನ್ನಾದರೂ ಮಾಡಿ ಸಾಧಿಸಬಹುದಿತ್ತು..

    ಎಷ್ಟೋ ಕೆಲಸಗಳಿವೆ, ಮಾಡಲು ಮನಸ್ಸಿಲ್ಲ...

 ಏನೋ ಕಾತುರತೆ.. ಆ ಕಾತುರತೆಗೆ ಅರ್ಥವಿಲ್ಲ.. 

    ಯಾವಾಗಲೂ ಕಾಡುವ ಶಂಕೆ.. ಸುಖ ಜೀವನದ ನಿಶ್ಚಿತತೆ ಮನದಾಳದಿಂದ ಉಕ್ಕುತ್ತಿದ್ದರೂ, ಅದಕ್ಕೆ ದೃಷ್ಟಿ ಬೊಟ್ಟಿನಂತೆ ಅನಿಶ್ಚಿತತೆಯ ಕಾಟ...

 ಉತ್ಸಾಹದಲ್ಲಿ ಇಂಗಿ ಆವಿಯಾಗುತ್ತಿರುವೇನೋ ಎಂಬ ಭಾವ. ಆದರೂ ಮನಸ್ಸು ಗಟ್ಟಿಯಾಗಿ ಬೇರೂರಿದೆ.. ಬಿಟ್ಟರೆ ಚಿಗರೆಯಂತೆ ಮಿಂಚಿ ಮಾಯವಾಗುವೆ.. ಆದರೆ ನನಗೆ ನಾನೇ ದಿಗ್ಬಂಧನ ಹಾಕಿಕೊಂಡಿರುವೆ. ಅಂತರಿಕ್ಷ ನೌಕೆಯ ಉಡಾವಣೆಗೆ ನಿಗದಿತ ಮುಹೂರ್ತ ಇರುವಹಾಗೆ, ನನ್ನ ಉಡಾವಣೆಯ ಮುಹೂರ್ತಕ್ಕೆ ಕಾದಿರುವೆ.. ಬದುಕೆಂಬ ಅಂತರಿಕ್ಷದ ಅಂಧಕಾರದಲ್ಲಿ ಅದಾವ ಅದ್ಭುತ ಲೋಕವನ್ನು ಕಂಡುಹಿಡಿಯುವೆ ತಿಳಿಯೆ. 

    ಬುದ್ಧಿ ಕಲಸುಮೇಲೋಗರವಾಗಿದೆ. ಸಂತಸ, ದುಃಖ, ಕಾತರತೆ, ಕುತೂಹಲ, ಅನುಮಾನ, ನಂಬಿಕೆ, ಉತ್ಸಾಹ, ಉದಾಸೀನತೆ, ಭಯ, ಪ್ರೀತಿ, ಬಯಕೆ, ನಿಸ್ಪೃಹತೆ, ದೈನ್ಯತೆ, ಅಧೀನತೆ.. ಎಲ್ಲ ಭಾವನೆಗಳು ಒಮ್ಮೆಲೇ ದಾಳಿಯಿಡುತ್ತಿವೆ.. 

 ಆದರೆ ಒಂದು ಮಾತು ನಿಜ.. ಕಡಗೋಲು ಹಾಕಿ ಕಲಕುವಂತಾಗಿರುವ ಬುದ್ಧಿ ತನ್ನ ಸ್ಥಿಮಿತ ಕಂಡುಕೊಂಡಾಗ 'ಅನುಭವ' ಎಂಬ ಗಾಢ ಬೆಣ್ಣೆ ಮೇಲೆ ತೇಲುತ್ತದೆ..... ಅನುಭವದ ಬೆಣ್ಣೆಯು, ಪ್ರೀತಿಪಾತ್ರರ 'ಸಹಕಾರ'ವೆಂಬ ಬಾಣಲೆಯಲ್ಲಿಟ್ಟು, 'ಸ್ಫೂರ್ತಿ'ಎಂಬ ಒಲೆಯಮೇಲಿರಿಸಿ, 'ದುಡಿಮೆ' ಎಂಬ ಬೆಂಕಿಯಲ್ಲಿ ಕಾಯಿಸಿದರೆ... ಆಹಾ!!! 'ಸಾಧನೆಯ' ತುಪ್ಪವನ್ನು ಮೆಂದು ದಪ್ಪವಾಗುವುದು ಖಚಿತ!!! 

    ಸಧ್ಯಕ್ಕೆ ಮನಸ್ಸು ನನ್ನ ಬುದ್ಧಿಗೆ ಹೇಳುವ ಬುದ್ಧಿಮಾತು ಇದೊಂದೇ  - " ಶಾಂತಿ... ಶಾಂತಿ... ಶಾಂತಿ.."

Wednesday, August 24, 2011

ಹಸಿವು ಕ್ರಾಂತಿ


ಹಸಿವಾಗಿದೆ ಉಸಿರೇರಿದೆ
ಕಾಡಿದೆ ಭಾವ ಬಡತನ,
ಅನ್ಯಾಯದಿ ಮನಗೆಟ್ಟಿದೆ
ಬೇಕಿದೀ ದುರ್ಗತಿ ದಮನ.

ಎಚ್ಚೆದ್ದಿದೆ ಭುಗಿಲೆದ್ದಿದೆ
ಮೈಕೊಡವಿದೆ ಜನಮನ,
ಸಮಚಿತ್ತದೆ ಮುನ್ನುಗ್ಗಿದೆ
ದೇಶ ದೇಶಾಂತರದ ಜನ.

ಭ್ರಷ್ಟಾಳ್ವಿಕೆ ಮಂಪರಿನೆವೆ
ಎಚ್ಚರಿಸಿದೆ ಕ್ರಂದನ,
ಬೆದರಿದಿಂದೆ ರಾಜಕಾರಣೆದೆ
ಕಂಡು ಪ್ರಜೆಗಳೊಮ್ಮನ.

ಬದುಕಿರಲಿ ಎಂದೆಡುವದೆ
ಒಗ್ಗಟ್ಟಿನ ಜನಬಲ,
ನಡೆದಿರಲಿ ತಡೆಯಿರದೆ
ಈ ಸಾತ್ವಿಕ ಚಿಂತನ.

Wednesday, June 16, 2010

CAFE` ಸಂಜೆ

" India needs 30 runs from 35 balls... This is an easy win if India doesn't loose wickets...."
LCD TV ಇಂದ ಕೇಳಿಬರುತ್ತಿತ್ತು ರವಿಶಾಸ್ರ್ತಿಯ ಕಂಚಿನ ಕಂಠದ ಕಾಮೆಂಟ್ರಿ. ಅಲ್ಲೇ ಪಕ್ಕದಲ್ಲಿ ಸುಸಜ್ಜಿತ ಸೋಫಾದಲ್ಲಿ ನಾನು ನನ್ನ ಬಳಗದೊಂದಿಗೆ relax ಮಾಡುತ್ತಿದ್ದೆ. ನಮ್ಮ ಮುಂದೆ Chocolate ice-cream, Cheese cake, Ice coffee, ice tea, cappuccino, espresso ಮುಂತಾದುವುಗಳ ಮಹಾಪೂರವೇ ನೆರೆದಿತ್ತು. ಆಗತಾನೆ ಊಟ ಮುಗಿಸಿದ್ದ ನಾವು ಇವನ್ನು ತಿನ್ನಲಾರದೆ ತಿನ್ನುತಿದ್ದೆವು. ನಾನು 'Cappuccino' ಎಂಬೋ ಬಿಸಿ ಕಾಫಿಯನ್ನು ಹೀರುತ್ತಾ ನನ್ನ ಬಳಗದವರ ಮಾತನ್ನು ಕೇಳುತ್ತಿದ್ದೆ. ಹಾಡಿದ್ದೇ ಹಾಡಿದ ಕಿಸಬಾಯಿ ದಾಸನ ಹಾಡಿನಂತಿದ್ದ ಅವರ ಮಾತು ಬೇಸರವೆನಿಸಿತು. ಅಂತರ್ಮುಖಿಯಾಗಿರುವುದೇ ಲೇಸೆನಿಸಿತು. ಆಚೆ ಕಿಟಕಿಯ ಗಾಜಿನ ಮೇಲೆ ಮಳೆ ನೀರು ಹರಿಯುತ್ತಿತ್ತು, ಒಳಗೆ AC ಚಳಿ ಗಾಳಿ ಮೈಗೆ ಹಿಂಸೆಯಾಗಿತ್ತು. ಗೋಡೆಯ ಮೇಲಿದ್ದ ಗಡಿಯಾರಣ್ಣನ ಎರಡೂ ಮೀಸೆ ಕೋಪದಿಂದ ಸೊಟ್ಟಗಾಗಿರುವಂತೆ ಕಂಡಿತು. ಅವನ ಸಣ್ಣ ಮೀಸೆ ಕೆಳಕ್ಕೆ ಸೊಟ್ಟಗೆ ಬಾಗಿ, ನಾವು ಬಂದು ಎರಡು ಗಂಟೆಗಳಾಯಿತು ಎಂದು ಸಾರುತಿತ್ತು. Relax ಮಾಡಲು ಬಂದ ನನಿಗೆ ಏನೋ ಕಸಿವಿಸಿ.

ಅಷ್ಟರಲ್ಲಿ ಮಿತ್ರನಂತೆ ಬಂದ 'ಮಿತ್ರ' ತನ್ನ ಕಿರಣಗಳಿಂದ ಮೋಡಗಳನ್ನು ಚದುರಿ ಬೆಳಕಿನ ಉಡುಗೊರೆ ನೀಡಿದ. ಉದಾಸೀನದಿಂದ ಕೂತಿದ್ದ ನನ್ನ ಗೆಳೆಯರು, ಸಮಯದ ಅರಿವಾಗಿ ಆಫೀಸಿಗೆ ಹೊರಡಲು ಅಣಿಯಾದರು. ನಮ್ಮ Boss ಅದೆಷ್ಟೋ ಮೊತ್ತದ ಬಿಲ್ಲನ್ನು ಕಟ್ಟಿ ಆಚೆ ಬಂದರು.

ಆಚೆ ಎಲ್ಲವೂ ಹೊಚ್ಚ ಹೊಸದಂತೆ ಕಾಣುತ್ತಿತ್ತು. ಎಲವೂ ಸ್ವಚ್ಛ, ಸ್ಪಷ್ಟ. ಆಗ ಗೋಚರಿಸಿದ್ದು, ಮಳೆಯಲ್ಲಿ ಪೂರ್ತಿಯಾಗಿ ತೋಯ್ದ ಒಬ್ಬ ಕಾಲಿಲ್ಲದ ಮುದಿ ಭಿಕ್ಷುಕ. ತನ್ನ ಮುರಿದ ಮರದ ಹಾಳೆಯ ಗಾಲಿಯಮೇಲೆ ಕೂತು ನಮ್ಮೆಡೆಗೆ ಬರುತ್ತಿದ್ದ. ಹಸಿವೆಯಿಂದ ಉಸಿರಾಡಲೂ ಆತ ಅಶಕ್ತ. ದೃಶ್ಯ ಕಣ್ಣಿಗೆ ಕಟ್ಟಿತ್ತು... ಆಚೆ ಸ್ನೇಹಿತರು ಕಾರೊಳಗೆ ಕೂರಲು ಕರೆಯುತ್ತಿದ್ದರು...

ಕಾರು ಆಫೀಸಿನತ್ತ ಧಾವಿಸಿತ್ತು. ಸ್ನೇಹಿತರ ಮಾತು ಮುಂದುವರೆದಿತ್ತು... ಕಿಟಕಿಯಿಂದಾಚೆ ಸುಂದರ ನವ ವಿನ್ಯಾಸದ ಕಟ್ಟಡಗಳು ಏನನ್ನೋ ಸಾಧಿಸಿ ಗೆದ್ದವರಂತೆ ತಲೆಯೆತ್ತಿ ಸಾಲಾಗಿ ನಿಂತಿದ್ದವು. ಅವನ್ನು ನೋಡಿ ಏನೋ ಕಳಕೊಂಡ ಭಾವ. ಕಟ್ಟಡಗಳ ಬುನಾದಿ ಟೊಳ್ಳು ಎಂದು ಅನಿಸುತ್ತಿತ್ತು.

ಹೊಟ್ಟೆಯಲ್ಲಿ ಕುಕ್ಕುತ್ತಿತ್ತು ಮಧ್ಯಾನ್ನದ ಊಟ, ಕಣ್ಣಿಗೆ ಕಟ್ಟಿತ್ತು ಆ ಭಿಕ್ಷುಕನ ನೋಟ, ಮನದಲ್ಲಿ ಏನೋ ಸಂಕಟ. ಕೊನೆಗೆ ಕಿಸೆಯಿಂದ ಪರ್ಸನ್ನು ತೆಗೆದು ನೋಡಿದೆ.... ಅದರಲ್ಲಿ ಒಂದು ಬಿಡಿಗಾಸೂ ಇರಲ್ಲಿಲ್ಲ........ ಮನಸ್ಸಿಗೆ ಏನೋ ಹುಸಿಯಾದ ಸಮಾಧಾನವಾಗಿತ್ತು!!!!!....

Saturday, February 27, 2010

ಭ್ರಾಂತಿ



ಭ್ರಾಂತು ಬಂದಿದೆ ನನಗೆ
ಈ ಭ್ರಮೆಯ ಬಗ್ಗೆ,
ತಿಳಿಯದಾಗಿದೆ ಎನಗೆ
ಈ ಭ್ರಾಂತಿ ಬಗ್ಗೆ.

ಸೋಜಿಗವು ನನಗೆ
ಭೂತಕಾಲದ ಬಗ್ಗೆ,
ನಿನ್ನೆ ಎಂಬ ಭೂತ
ಇಂದು ಕಾಡಿದಬಗ್ಗೆ.

ಬೇಸರವು ನನಗೆ
ಈ ಭ್ರಾಂತಿ ಬಗ್ಗೆ,
ನಾಳೆಯಾ ಭವ-ವಿಷಯ
ಸಿಗದೀಗಿಂದ ಈಗ್ಗೆ.

ಅನುಮಾನ ನನಗೆ
ವರ್ತಮಾನದ ಬಗ್ಗೆ,
ಇಂದು ಎಂಬುದು ನಿಜವೇ?
ಹೇಳಿದರಬಗ್ಗೆ.

ಸತ್ಯವೇ ಉದ್ಭವಿಸು
ಮನದಲ್ಲಿ ಈಗ್ಗೆ,
ಸಾಕ್ಷಾತ್ಕಾರ ಸ್ಫೋಟಿಸು
ಒಡೆದು ಈ ಭ್ರಾಂತಿ ಬುಗ್ಗೆ.

Friday, January 29, 2010

ಹರಿದ ಹತ್ತು ರೂಪಾಯಿ


ಉಸಿರಾಡುತಿದ್ದೆ ಹಾಯಾಗಿ,
ಜೀವಂತ ಮರವಾಗಿ,
ಬದುಕಿದ್ದೆ ನಾ ಪರರಿಗಾಗಿ,
ಪರರು ಕಡಿದರು ನನ್ನ ಅವರವರಿಗಾಗಿ...

ತೀಡಿದರು ನನ್ನ ಹಾಳೆಯಾಗಿ,
ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,
ಟಂಕ ಠಸ್ಸೆಯ ಏಟು ತಿಂದಾಗಿ,
ಹೊರ ಬಂದೆ ನಾ ಹತ್ತು ರೂಪಾಯಾಗಿ...

ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,
ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,
ಓಡಿದೆ ನಾ ಹತ್ತು ರೂಪಾಯಾಗಿ...

ಕೈಗಳಲಿ ಒದ್ದಾಡಿ,
ಒದ್ದೆಯಿಂದೆದ್ದೊಣಗಿ
ಮತ್ತೊದ್ದೆಯಾಗಿ
ಮುಪ್ಪೇರಿ ಮುದಿಯಾಗಿ ಬಿದ್ದೆನಾ ತುಂಡಾಗಿ..

ಈಗ ಬಿದ್ದಿರುವೆ ತಿರಸ್ಕೃತನಾಗಿ,
ಸಾರಿದ್ದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಿಂದೆ ಉಸಿರಾಡುತಿದ್ದೆ ಹಾಯಾಗಿ,
ನಾ ಜೀವಂತ ಮರವಾಗಿ!!!!